ಡೇಲಿ ನ್ಯೂಸ್
 	ಪ್ರಖ್ಯಾತ ಇಂಗ್ಲಿಷ್ ಸಾಹಿತಿ ಚಾಲ್ರ್ಸ್ ಡಿಕನ್ಸನ ಸಂಪಾದಕತ್ವದಲ್ಲಿ 1846ರಲ್ಲಿ ಲಂಡನಿನಿಂದ ಪ್ರಕಟವಾಗಲಾರಂಭವಾದ ಇಂಗ್ಲಿಷ್ ದಿನಪತ್ರಿಕೆ. ಇದರ ಮಾಲೀಕರು ಜೋಸೆಫ್ ಪಾಕ್ಸ್‍ಟನ್, ಬ್ರಾಡ್‍ಬರಿ ಮತ್ತು ಇವಾನ್ಸ್. ಕೊನೆಯವರಿಬ್ಬರೂ ಹಾಸ್ಯಪತ್ರಿಕೆ ಪಂಚ್‍ನ ಸ್ಥಾಪಕರು. 

	ಪತ್ರಿಕೆ ಆರಂಭವಾದ ಮೂರು ವಾರಗಳಲ್ಲೇ ಸಂಪಾದಕನ ಸ್ಥಾನಕ್ಕೆ ಡಿಕನ್ಸ್ ರಾಜೀನಾಮೆ ನೀಡಿದ. ಸಾಹಿತಿ ಡಿಕನ್ಸನ ಜಾಯಮಾನಕ್ಕೆ ಸಂಪಾದಕತ್ವ ಒಗ್ಗದಿದ್ದುದು ಕಾರಣ. ಮಿಗಿಲಾಗಿ ಪತ್ರಿಕೆಯ ಪ್ರಸಾರ ಉತ್ತೇಜನಕಾರವಾಗಿರಲಿಲ್ಲ. ಆಗ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ 5 ಪೆನಿ. ಆದನ್ನು 2 1/2 ಪೆನಿಗೆ ಇಳಿಸಿದಾಗ ಅದರ ಪ್ರಸಾರ 4,000 ದಿಂದ 22,000ಕ್ಕೆ ಏರಿತು. 

	ಪತ್ರಿಕೆಯ ಧ್ಯೇಯ ಉದಾತ್ತವಾದ್ದಾಗಿತ್ತು. ಅದು ಉದಾರ ದೃಷ್ಟಿಯ ಪ್ರಚಾರಕ್ಕಾಗಿ ಶ್ರಮಿಸಿತು. ಇಟಲಿಯ ಸ್ವಾತಂತ್ರ್ಯ ಯುದ್ಧಕ್ಕೂ ಬಲ್ಗೇರಿಯನ್ ಮತ್ತು ಆರ್ಮೇನಿಯನ್ ವಿಮೋಚನೆಗೂ ವಿಶೇಷವಾದ ಬೆಂಬಲ ನೀಡಿತು. ಅನಂತರ ಇದು ಮಾರ್ನಿಂಗ್ ಲೀಡರ್ ಪತ್ರಿಕೆಯನ್ನು ವಿಲೀನಗೊಳಿಸಿಕೊಂಡಿತಲ್ಲದೆ ಸ್ಟಾರ್ ಪತ್ರಿಕೆಯನ್ನೂ ಪಡೆದುಕೊಂಡಿತು (1909).

	ಎ.ಜಿ. ಗಾರ್ಡಿನರ್ ಇದರ ಸಂಪಾದಕರಾಗಿದ್ದಾಗ (1902-1919) ಪತ್ರಿಕೆಯಲ್ಲಿ ಅನೇಕ ಸುಧಾರಣೆಗಳಾದುವು. ಪತ್ರಿಕೆ ಒಳ್ಳೆಯ ಹೆಸರು ಗಳಿಸಿತು. ಡೇಲಿ ನ್ಯೂಸ್ ಸಂಪಾದಕೀಯ ವಿಭಾಗದಲ್ಲಿದ್ದ ಶ್ರೇಷ್ಠ ಪತ್ರಕರ್ತರು ಎಚ್. ಡಬ್ಲ್ಯೂ. ಮ್ಯಾಸಿಂಗ್‍ಹ್ಯಾಮ್ ಮತ್ತು ಹ್ಯಾರಲ್ಡ್ ಸ್ಪೆಂಡರ್. ಜಿ.ಕೆ. ಚೆಸ್ಟರ್‍ಟನ್ನನ ಸೇವೆ ಕೂಡ ಈ ಪತ್ರಿಕೆಗೆ ಸಂದಿದೆ. 

	1909ರಲ್ಲಿ ಇದು ವೆಸ್ಟ್‍ಮಿನ್‍ಸ್ಟರ್ ಗೆಜೆಟನ್ನು ವಿಲೀನಗೊಳಿಸಿಕೊಂಡಿತು. ಒಳ್ಳೆಯ ಪ್ರಸಾರವಿದ್ದರೂ ಪತ್ರಿಕೆ ಆರ್ಥಿಕ ತೊಂದರೆಗೆ ಒಳಗಾಯಿತು. 1930ರಲ್ಲಿ ಡೇಲಿ ನ್ಯೂಸ್ ಮತ್ತು ಡೇಲಿ ಕ್ರಾನಿಕಲ್‍ಗಳನ್ನು ಒಂದುಗೂಡಿಸಿ ನ್ಯೂಸ್ ಕ್ರಾನಿಕಲ್ ಎಂಬ ಹೆಸರಿನಿಂದ ಪ್ರಕಟನೆಯನ್ನು ಮುಂದುವರಿಸಲಾಯಿತು.						  
(ಕೆ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ